ಪುಂಡರೀಕ ವಿಠ್ಠಲ
ಕ್ರಿ. ಶ. 1570. ಒಬ್ಬ ಪ್ರಸಿದ್ಧ ಸಂಗೀತ ಶಾಸ್ತ್ರಜ್ಞ ಹಾಗೂ ಗಾಯಕ. ಕರ್ನಾಟಕ ದೇಶದವ. ಹುಟ್ಟಿದ್ದು ಜಾಮದಗ್ನಿ ಗೋತ್ರದ ಬ್ರಾಹ್ಮಣ ಮನೆತನದಲ್ಲಿ. ಬಾಲ್ಯದಲ್ಲಿಯೇ ತುಂಬಾ ಬುದ್ಧಿವಂತನಾಗಿದ್ದು, ಬಲು ಬೇಗ ಕರ್ನಾಟಕ ಸಂಗೀತವನ್ನು ಚೆನ್ನಾಗಿ ಕಲಿತುಕೊಂಡ. ಮಹತ್ವಾಕಾಂಕ್ಷೆಯಿಂದ ದೇಶಬಿಟ್ಟು ಹೊರಗೆ ಹೊರಟು ಮೊದಲು ಬುದ್ಹಾಣಪುರದಲ್ಲಿ ರಾಜಾ ಬುರ್ಹಾಣಖಾನ್ ಸುಲ್ತಾನನ ಬಳಿ ಆಶ್ರಯ ಪಡೆದು ಆಗಿನ ಕಾಲಕ್ಕೆ ತುಂಬ ಗೊಂದಲಮಯವಾಗಿದ್ದ ಹಿಂದೂಸ್ಥಾನೀ ಸಂಗೀತವನ್ನು ಸುಸಂಬದ್ಧವಾಗಿಸಲು ಯತ್ನಿಸಿದ. ಇದಕ್ಕೆ ರಾಜನ ಪ್ರೋತ್ಸಾಹವೂ ಇತ್ತು. ಪುಂಡರೀಕನಿಂದ ಸದ್ರಾಗ ಚಂದ್ರೋದಯ ಎಂಬ ಗ್ರಂಥ ರಚಿತವಾಯಿತು. ಅನಂತರ ರಾಜಾ ಮಾನಸಿಂಗ್ ಎಂಬ ರಾಜಪೂತ ದೊರೆಯ ಆಶ್ರಯದಲ್ಲಿ ಅವನ ಆಜ್ಞೆಯಂತೆ ರಾಜಮಂಜರಿ ಎಂಬ ಗ್ರಂಥವನ್ನು ರಚಿಸಿದ. ಸಂಗೀತ ಪ್ರಪಂಚದಲ್ಲಿ ವಿಶೇಷ ಕೀರ್ತಿಯನ್ನು ಪಡೆದ. ಇವನ ಕೀರ್ತಿ ಅಕ್ಬರನಿಗೆ ಮುಟ್ಟಿ ಇವನನ್ನು ಆಹ್ವಾನಿಸಿ (ಸು. 1599) ಆಶ್ರಯವಿತ್ತು ಮನ್ನಿಸಿದ. ಮೊಗಲ್ ದರಬಾರದಲ್ಲಿ ರಾಜಾಶ್ರಯದಲ್ಲಿ ರಾಗಮಾಲಾ ಎಂಬ ಗ್ರಂಥ ರೂಪುಗೊಂಡಿತು. ಇದರಲ್ಲಿ ರಾಗ ವರ್ಗೀಕರಣ ಮತ್ತು ಪರಿವಾರ ಪದ್ಧತಿಗಳನ್ನು ಮಂಡಿಸಲಾಗಿದೆ. ಔತ್ತರೇಯ ಪದ್ಧತಿಯಲ್ಲಿ ದಾಕ್ಷಿಣಾತ್ಯ ಪದ್ಧತಿಯಲ್ಲಿರುವ ಮೇಳ ಮತ್ತು ಜನ್ಮರಾಗಗಳ ಲಕ್ಷಣವನ್ನು ಬಳಸಿಕೊಂಡಿರುವುದನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ನೃತ್ಯ ನಿರ್ಣಯ ಎಂಬ ಇನ್ನೊಂದು ಗ್ರಂಥವೂ ಅಲ್ಲೇ ರೂಪುಗೊಂಡಿತು. ರಾಜನಿಂದ ವಿಶೇಷ ಮನಮರ್ಯಾದೆಗಳು ಸಂದುವು.
(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ